ಕುಷ್ಠ

	ಮೈಕ್ರೊಬ್ಯಾಕ್ಟೀರಿಯ ಲೆಪ್ರೇ ಎಂಬ ಹೆಸರಿನ ಆಮ್ಲಸ್ಥಾಯಿ (ಆಸಿಡ್-ಫಾಸ್ಟ್) ದಂಡಾಣು ಜೀವಿಗಳಿಂದ (ಬ್ಯಾಸಿಲೈ) ಹರಡುವ ತೀವ್ರವ್ಯಾಧಿ (ಲೆಪ್ರಸಿ). ಹ್ಯಾನ್ಸನ್ನನ ವ್ಯಾಧಿ ಪರ್ಯಾಯನಾಮ. ಈ ರೋಗದಿಂದ ಗ್ರಸ್ತವಾಗುವ ಭಾಗಗಳು ಮುಖ್ಯವಾಗಿ ಚರ್ಮ, ಕಣ್ಣುಗಳು, ಮೂಗು ಮತ್ತು ಗಂಟಲಿನ ಲೋಳೆಪೊರೆಗಳು, ಕೆಲವು ಹೊರವಲಯದ ನರಗಳು ಮತ್ತು ವೃಷಣಗಳು ರೋಗಿಯೊಡನೆ ನಿಕಟ ದೀರ್ಘಕಾಲಿಕ ಸಂಪರ್ಕವಿದ್ದಾಗ ಕುಷ್ಠರೋಗ ಸಾಂಕ್ರಾಮಿಕವೂ ಹೌದು. 

	ಇತಿಹಾಸ : ಕುಷ್ಠರೋಗ ಬಹು ಪುರಾತನ ಕಾಲದಿಂದ ಇರುವ ರೋಗ. ಉಷ್ಣವಲಯದಲ್ಲಿ ಇದರ ವ್ಯಾಪ್ತಿ ಹಾಗೂ ತೀವ್ರತೆ ಹೆಚ್ಚು. ಇದು ಹೇಗೆ ಅಂಕುರಿಸಿತು, ಹೇಗೆ ಹರಡಿತು-ಎಂಬುದು ಇನ್ನೂ ಊಹೆಯಾಗಿಯೇ ಇದೆ. ಇದು ಬಹುಶಃ ಆಫ್ರಿಕ ದೇಶದಲ್ಲಿ ಅಂಕುರಿಸಿ ಭಾರತ ಚೀನಗಳಿಗೂ ಈಜಿಪ್ಟಿನ ಮಾರ್ಗವಾಗಿ ಯೂರೋಪಿಗೂ ಅನಂತರ ಅಮೆರಿಕ ದೇಶಗಳಿಗೂ ಹರಡಿರಬೇಕು. ಇಷ್ಟು ದೇಶಗಳನ್ನು ಈ ರೋಗ ಕಾಡಿದ್ದರೂ ಭಾರತದ ಪುರಾತನ ಗ್ರಂಥಗಳಲ್ಲಿ ಮಾತ್ರ ಇದರ ಬಗ್ಗೆ ವರದಿ ಉಂಟು. 1ನೆಯ ಶತಮಾನದಲ್ಲಿದ್ದ ಚರಕ ಸುಶ್ರುತರ ಕಾವ್ಯಗಳಲ್ಲೂ 6ನೆಯ ಶತಮಾನದ ವಾಗ್ಭಟ ಬರೆದ ಸಂಹಿತೆಗಳಲ್ಲಿಯೂ ರೋಗದ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳನ್ನು ವಿವರಿಸಿದ್ದಾರೆ. ಕ್ರಿ.ಪೂ. 5ನೆಯ ಶತಮಾನದ ಮನುಸ್ಮøತಿ ಮತ್ತು ಅದಕ್ಕೂ ಹಿಂದಿನ ಅಥರ್ವವೇದದಲ್ಲಿ (ಕ್ರಿ.ಪೂ. 10ನೆಯ ಶತಮಾನ) ಸಹ ಕುಷ್ಠರೋಗದ ಪ್ರಸ್ತಾಪ ಬಂದಿದೆ. ಚರಕ ಸಂಹಿತದಲ್ಲಿ ಕುಷ್ಠರೋಗದ  ಏಳು ಭಿನ್ನರೂಪಗಳನ್ನು ವಿವರಿಸಲಾಗಿದೆ. ಇದರಲ್ಲಿ ಕೆಲವು ರೂಪಗಳು ಆಧುನಿಕ ವೈದ್ಯಶಾಸ್ತ್ರದರೀತ್ಯಾ ಕುಷ್ಠರೋಗ ಚಿಹ್ನೆಗಳಿಗೆ ಹೋಲುತ್ತವೆ. ಮತ್ತೆ ಕೆಲವು ಬೇರೆ ಚರ್ಮರೋಗವಿದ್ದರೂ ಇರಬಹುದೆಂಬ ಶಂಕೆ ಬರುವುದು. ಚರ್ಮದ ಅರಿವಳಿಕೆ, ಬಣ್ಣಗುಂದಿಕೆ. ಕುಸಿದ ಮೂಗು, ಅಂಗವಿಕಾರ ಮೊದಲಾದ ಈ ರೋಗದ ಲಕ್ಷಣಗಳನ್ನು ಮಾತ್ರವಲ್ಲ ಇದು ಅಂಟುರೋಗವೆಂಬುದನ್ನೂ ಆ ಕಾಲದಲ್ಲಿಯೇ ಜನ ಸ್ಪಷ್ಟವಾಗಿ ತಿಳಿದಿದ್ದರು. ಕುಷ್ಠರೋಗಿಯೊಬ್ಬ ಅಂದು ತನ್ನ ಸ್ವಂತ ಹಕ್ಕುಗಳನ್ನೂ ಮತಧರ್ಮವನ್ನೂ ಕಳೆದುಕೊಳ್ಳುತ್ತಿದ್ದ. ಆದರೆ ಜನಜೀವನದಿಂದ ಅವನನ್ನು ಬಹಿಷ್ಕರಿಸುತ್ತಿರಲಿಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಾದರೋ ಕುಷ್ಠರೋಗಿ ಜನ ಸಂಪರ್ಕಕ್ಕೆ ಬರುವಂತಿರಲಿಲ್ಲ ಅವನನ್ನು ಪ್ರತ್ಯೇಕಿಸುತ್ತಿದ್ದರು. ಮಧ್ಯಯುಗದ ಯೂರೋಪು ಕುಷ್ಠರೋಗ ಪೀಡಿತವಾಗಿತ್ತು. ಆದರೆ ಬರಬರುತ್ತ ಇದು ವಿಮುಕ್ತಗೊಂಡದ್ದು ಒಂದು ಸೋಜಿಗ.

	ಕೈಗಾರಿಕ ಕ್ರಾಂತಿಯಿಂದ ಜೀವನಮಟ್ಟ ಏರಿದ್ದೂ ಕುಷ್ಠರೋಗಗಳನ್ನೆಲ್ಲ ಕಡ್ಡಾಯವಾಗಿ ಅದಕ್ಕಾಗಿಯೇ ಊರ ಹೊರಗಡೆ ಕಟ್ಟಿದ ಕುಷ್ಠಗೃಹಗಳಲ್ಲಿ ಬೇರೆಯಾಗಿಡುತ್ತಿದ್ದ ಪದ್ಧತಿಗಳೂ ಇದಕ್ಕೆ ಸಹಾಯಕವಾಗಿರಬೇಕು.  ಪ್ರಪಂಚದಲ್ಲಿ ಇಂದು 12 ದಶಲಕ್ಷಕ್ಕೂ ಕಡಿಮೆ ಇಲ್ಲದಷ್ಟು ಜನ ಕುಷ್ಠರೋಗಿಗಳಿದ್ದಾರೆಂದು ಅಂದಾಜು. ಭಾರತದಲ್ಲಿ ಸುಮಾರು 2.5 ದಶಲಕ್ಷ ರೋಗಿಗಳಿರಬಹುದು. ಕರ್ಣಾಟಕದಲ್ಲಿ ಸುಮಾರು 1.5 ಲಕ್ಷ ಜನ ರೋಗಪೀಡಿತರಿರುವರೆಂದು ಅಂದಾಜಾಗಿದೆ. ಭಾರತದಲ್ಲಿ ಪ್ರತಿ 1,000 ಜನಸಂಖ್ಯೆಯಲ್ಲಿ 6.4 ಮಂದಿ ಕುಷ್ಠ ರೋಗಗ್ರಸ್ತರಾಗಿರುವರೆಂದು ತಿಳಿದಿದೆ. 

	ಲಕ್ಷಣಗಳು : ಕುಷ್ಠ ಮಂದಗತಿಯ ಆದರೆ ತೀವ್ರಪರಿಣಾಮದ ಅಂಟುರೋಗ. ನಾರ್ವೇದೇಶದ ಹ್ಯಾನ್ಸನ್ ಎಂಬಾತ ಈ ರೋಗಕ್ಕೆ ಕಾರಣವಾದ ಕುಷ್ಠದ ದಂಡಾಣು ಜೀವಿಯನ್ನು ಕುಷ್ಠ ಗಂತಿಗಳಲ್ಲಿ ಶೋಧಿಸಿದ್ದರಿಂದ (1871) ಆತನ ಹೆಸರಿನಿಂದಲೂ ಈ ರೋಗವನ್ನು ಕರೆಯುವುದುಂಟು. ಈ ರೋಗದ ಸೋಂಕು ಒಬ್ಬ ರಿಂದ ಇನ್ನೊಬ್ಬರಿಗೆ ಹರಡಲು ದೀರ್ಘವಾದ ನಿಕಟ ದೈಹಿಕ ಸಂಪರ್ಕ ಪದೇ ಪದೇ ಅಗತ್ಯ. ಚರ್ಮದ ಮೇಲಿರಬಹುದಾದ ಗೀಚಲು ಇಲ್ಲವೇ ಗಾಯಗಳ ಮೂಲಕ ರೋಗದ ಜೀವಿಗಳು ದೇಹವನ್ನು ಸೇರುತ್ತವೆ. ಇದಾಗಿ 2 ರಿಂದ 5 ವರ್ಷಗಳ ವರೆಗೆ ರೋಗಲಕ್ಷಣಗಳು ಪ್ರಕಟಗೊಳ್ಳಲು ಕಾಲಾವಕಾಶ ಬೇಕು. ಈ ಕಾಲಾವಧಿಗೆ ಕುಮಲುವ ಕಾಲ ಎಂದು ಹೆಸರು. ಕುಷ್ಠರೋಗದ ಮೂಲ ಬದಲಾವಣೆ ಹೊರ ಮೈ ಚರ್ಮದ ನರಗಳಲ್ಲಿದ್ದು, ಅವುಗಳ ಹತೋಟಿಯಲ್ಲಿರುವ ಸ್ಪರ್ಶಜ್ಞಾನ ಚಲನ ಶಕ್ತಿಯ ವ್ಯತ್ಯಾಸಗಳೇ ಮುಖ್ಯ ತೋರಿಕೆಗಳು. ರೋಗದ ಮೊಟ್ಟಮೊದಲ ಅಂಗದ ಗಾಯ (ಲೀಸಿಯನ್) ಸಾಮಾನ್ಯವಾಗಿ ಅಸ್ಪಷ್ಟವಾಗಿರುವುದು. ಅನೇಕ ವೇಳೆ ಇದು ರೋಗಿಗೆ ಗೋಚರವಾಗದೆ ಇರಬಹುದು. ಸಾಮಾನ್ಯವಾಗಿ ಆರೋಗ್ಯಮೋಜಣಿಗಳಲ್ಲಿ ದೇಹಪರೀಕ್ಷೆಮಾಡಿದಾಗ ಇವು ಕಂಡುಬರುವುದುಂಟು. ಒಂಟಿಯಾದ, ಮಂದ ಪ್ರತಿಕ್ರಿಯೆಯ ಈ ಸಣ್ಣ ಮಚ್ಚೆಗಳು ದೇಹದ ಯಾವ ಭಾಗದ ಮೇಲಾದರೂ ಕಾಣಬಹುದು. ಮಚ್ಚೆಗಳ ಅಂಚೂ ಇರವೂ ಬಲುಮಸಕು. ರೋಗದ ಪ್ರಾರಂಭದಿಶೆಯನ್ನು ಅನಿಶ್ಚಿತ ಕುಷ್ಠ ಎನ್ನುತ್ತಾರೆ. ಇದರ ಮುಂದಿನ ಗತಿ ರೋಗಿಯನಿಗ್ರಹಣ ಶಕ್ತಿಯ ಮಟ್ಟವನ್ನು ಅವಲಂಬಿಸಿದ್ದು. ಆ ಶಕ್ತಿ ಸಾಕಷ್ಟು ಇರುವವರಲ್ಲಿ ಅಸ್ಪಷ್ಟವಾದ ಮೊದಲ ಮಚ್ಚೆಗಳ ಅಂಚು ಮಂದವಾಗಿ, ಮಚ್ಚೆಯೂ ಮಂದವಾಗಿ, ಸ್ಪಷ್ಟವಾಗಿ ಕಾಣದಂತೆ ಬದಲಾಗುತ್ತದೆ. ಚರ್ಮದ ನರಗಳ  ಅರಿವಳಿಕೆ ವ್ಯಕ್ತವಾಗುತ್ತದೆ. ಅವುಗಳ ಚರ್ಮದ ಬಣ್ಣ ಪಕ್ಕದ ಚರ್ಮಕ್ಕಿಂತ ಮಂದ. ರೋಗದ ದಂಡಾಣುಗಳು ಇಂಥ ಮಚ್ಚೆಗಳಲ್ಲಿ ಹೆಚ್ಚಾಗಿರುವುದಿಲ್ಲ. ಆದ್ದರಿಂದ ಕುಷ್ಠರೋಗದ ಮಚ್ಚೆಗಳಿಂದ ಸಾಮಾನ್ಯ ಪರಿಕ್ಷಾಕ್ರಮಗಳಿಂದ ದಂಡಾಣುಗಳನ್ನು ಪ್ರತ್ಯೇಕಿಸಿ ತೋರಿಸಲಾಗುವುದಿಲ್ಲ. ರೋಗದ ಈ ರೂಪ ಕೆಲವು ವೇಳೆ ತಾನಾಗಿ ಗುಣವಾಗುವುದು. ಚಿಕಿತ್ಸೆಯಿಂದ ಇದನ್ನು ಚೆನ್ನಾಗಿ ಗುಣಪಡಿಸಬಹುದು. ಕುಷ್ಠರೋಗದ ಇಂಥ ರೂಪಕ್ಕೆ ಕ್ಷಯಗತಿಯಂಥ ಕುಷ್ಠ ಎಂದು ಹೆಸರು. ಈ ರೋಗಕ್ಕೆ ಒಳಗಾದ ಊತಕಗಳ ರಚನೆ ಕ್ಷಯಗಂತಿಯ ಸೂಕ್ಷ್ಮ ರಚನೆಗೆ ಹೋಲುವುದರಿಂದ ಈ ಹೆಸರು ಬಂದಿದೆ. ಭಾರತದಲ್ಲಿ 80%ರಷ್ಟು ರೋಗ ಈ ರೂಪದ್ದು.

      ರೋಗನಿಗ್ರಹಣ ಶಕ್ತಿ ಕಡಿಮೆ ಇರುವವರಲ್ಲಿ ಮೊದಲ ಮಚ್ಚೆಗಳು ಅಸ್ಪಷ್ಟವಾಗಿದ್ದರೂ ಅವು ಹೆಚ್ಚಾಗಿ ಇಡೀ ದೇಹವನ್ನು ಆವರಿಸಿ ಭಯಾನಕವಾಗಿ ಕಾಣುತ್ತವೆ. ಈ ರೂಪದಲ್ಲಿ ಚರ್ಮದ ಕಲೆಗಳಿಂದ ಸಾಮಾನ್ಯಪರೀಕ್ಷಾಕ್ರಮದಿಂದ ಅತಿ ಸುಲಭವಾಗಿ ಕುಷ್ಠರೋಗದ ದಂಡಾಣುಗಳನ್ನು ಪ್ರತ್ಯಕ್ಷವಾಗಿ ತೋರಿಸಬಹುದು. ರೋಗಿಗೂ ಸಮಾಜಕ್ಕೂ ಅಪಾಯಕರವಾದ ರೂಪವಿದು. ಅಗೋಚರವಾದ  ಕಲೆಗಳು ರೋಗ ಮುಂದುವರಿದಂತೆ ರುಂಡ, ಮುಂಡ,ಕೈಕಾಲುಗಳ ಮೇಲೆ ಹರಡಿ ಅಂಗದ ಗಾಯ, ದಪ್ಪ ದಪ್ಪ ಗಂಟುಗಳು ಆಗುವುವು. ಮುಖದ ಚರ್ಮವೆಲ್ಲಾ ಅಂಗದ ಗಾಯದ ಒಳಪಸರಿಕೆಯಿಂದಲೂ ಗಂಟುಗಳಿಂದಲೂ ಮಂದವಾಗಿ ಸಿಂಹದ ಮುಖದಂತೆ ಕಾಣುವುದು. ಇಂಥ ಗಂಟುಗಳಲ್ಲಿ ಕುಷ್ಠ ದಂಡಾಣುಗಳು ತುಂಬಿರುವ ವಿಶಿಷ್ಟವಾದ ನೊರೆ ಜೀವಕಣಗಳಿರುತ್ತವೆ. ಆದ್ದರಿಂದ ಈ ತೆರನಾದ ರೋಗದ ರೂಪಕ್ಕೆ ಕುಷ್ಠಗತಿಯ ತೆರನ ಕುಷ್ಠ ಎಂದು ಹೆಸರು. 

	 ಈ ಏರಡು ಪರಸ್ಪರ ವಿರುದ್ಧ ರೂಪಗಳ ಮಧ್ಯೆ ಮಧ್ಯವರ್ತಿ ರೂಪ ಇದೆ. ಇದನ್ನು ದ್ವಿರೂಪಿ ಕುಷ್ಠ ಎನ್ನಬಹುದು. ಇಂಥ ರೋಗ ಪೀಡಿತನ ದೇಹದಲ್ಲಿ  ರೋಗದ ತೀವ್ರ ಮತ್ತು ಸೌಮ್ಯರೂಪದ ಲಕ್ಷಣಗಳು ಬೇರೆ ಬೇರೆ ಕಡೆಗಳಲ್ಲಿ ಕಾಣುಬಹುದು. ಮತ್ತು ಕಾಲಕ್ರಮೇಣ ರೋಗಿಯ ನಿಗ್ರಹಣಶಕ್ತಿಯ ಮಟ್ಟಕ್ಕೆ ಅನುಗುಣವಾಗಿ ಎರಡು ರೂಪಗಳಲ್ಲಿ ಯಾವುದಾದರೊಂದು ಕಡೆ ಸಾಗಬಹುದು. ನಿಗ್ರಹಣಶಕ್ತಿ ಅನೇಕ ಕಾರಣಗಳಿಂದ ಇಲ್ಲವೇ ಕಾರಣವಿಲ್ಲದೆಯೇ ಬದಲಾಯಿಸಿ ರೋಗದ ಲಕ್ಷಣಗಳು ಬದಲಾಗಬಹುದು. ತ್ರೀವವಾದ ನಿಗ್ರಹಣಶಕ್ತಿ  ಇರುವ ಕ್ಷಯಗಂತಿ ಯಂಥ ಕುಷ್ಠರೋಗಿಯ ನಿಗ್ರಹಣಶಕ್ತಿ ಕುಗ್ಗಿದಾಗಲೂ ಅಲ್ಲದೇ ಇಳಿಮುಖದ ಪ್ರತಿ ಕ್ರಿಯೆಯಿಂದಲೂ ರೋಗಿ ಕುಷ್ಠಗಂತಿತೆರನ ರೂಪಕ್ಕೆ ಮಾರ್ಪಾಡಾಗಬಹುದು. ಹಾಗೆಯೇ ಮೇಲೆ ಹೇಳಿದ ಗುಂಪಿನ ರೋಗಿಯಲ್ಲಿ ನಿರೋಧಶಕ್ತಿ ಹೆಚ್ಚಿ ತಿರುಗುಪ್ರತಿ ಕ್ರಿಯೆಯಾಗಬಹುದು. ಈ ಎರಡು ಸಂದರ್ಭಗಳಲ್ಲಿ ಪ್ರತಿಕ್ರಿಯೆ ಒಂದೇ ರೀತಿಯದು - ಸ್ಥಳೀಯಲಕ್ಷಣಗಳಾದ ಚರ್ಮದ ಕೆಂಪೇರುವಿಕೆ. ಊತ ಮತ್ತು ನೋವು ಇರುತ್ತವೆ. ಸಾಮಾನ್ಯವಾಗಿ ಕುಷ್ಠಗಂತಿತೆರನ ಕುಷ್ಠದಲ್ಲಿ ಇನ್ನೂ ಎರಡು ರೀತಿಯ ಪ್ರತಿಕ್ರಿಯೆಗಳಾಗಬಹುದು. ಮೇಲಿನ ಎರಡು ಪ್ರತಿಕ್ರಿಯೆಗಳು ನಿರೋಧಶಕ್ತಿಯ ಏರಿಳಿತಗಳಿಂದಾದರೆ, ಇವು ದಂಡಾಣುಗಳ ಬದಲಾವಣೆಗಳಿಂದ ಆಗುವುವು. ಚಿಕಿತ್ಸೆಯಿಲ್ಲದ ರೋಗಿ ಅಥವಾ ಮರುಕಳಿಸಿದ ರೋಗಿಯಲ್ಲಿ ಹಿಡಿತಕ್ಕೆ ಸಿಕ್ಕದೆ ದಂಡಾಣುಗಳು ವೃದ್ಧಿಯಾಗಿ ಮೈ ಮೇಲೆ ಕಾಣುವ ಗಂಟುಗಳಿಗೆ ಉದ್ರೇಕಿತ ಕಿಗ್ಗಂಟುಗಳು ಎಂದು ಹೆಸರು. ಇದು ಒಂದು ತೆರನ ಪ್ರತಿಕ್ರಿಯೆ. ಎರಡನೆಯ ಪ್ರತಿಕ್ರಿಯೆ ಅತಿ ತೀವ್ರವಾದುದು ಇದಕ್ಕೆ ಕೆಂಪು ಗಂಟು ಕುಷ್ಠಾಂದ ಎಂದು ಹೆಸರು. ಸ್ಥಳೀಯ ಅಂಗದ ಗಾಯಗಳು ಹೆಚ್ಚುವುವಲ್ಲದೆ ಇಡೀ ದೇಹಸ್ಥಿತಿ ಕಲಕಿ ಮೈನೋವು, ಜ್ವರ ಹೆಚ್ಚಾಗಿ ರೋಗಿ ತೆಗೆದುಕೊಳ್ಳುತ್ತಿದ್ದ ಔಷಧಿಗಳನ್ನು ನಿಲ್ಲಿಸಬೇಕಾಗಬಹುದು. ಈ ಪ್ರತಿಕ್ರಿಯೆ ಅಪೂರ್ವವಾಗಿ ಚಿಕಿತ್ಸೆ ಪಡೆಯದಿರುವವರಲ್ಲಿಯೂ ಬರಬಹುದು. ಇದಕ್ಕೆ ದಂಡಾಣುಗಳ ಮೇಲೆ ಡ್ಯಾಪಸೋನ್ ರಾಸಾಯನಿಕ ಮದ್ದುಗಳ ಪರಿಣಾಮವಾಗಿ ಅಥವಾ ಕೊಲ್ಲಲ್ಪಟ್ಟ ಮತ್ತು ಚೂರಾದ ದಂಡಾಣುಗಳಿಂದ ಬಿಡುಗಡೆಯಾದ ಪ್ರೋಟೀನ್ ವಸ್ತುಗಳು ದೇಹದ ಮೇಲೆ ಬೀರುವ ಪ್ರಭಾವವೇ ಕಾರಣ.

	ಚರ್ಮದ ಅಂಗದ ಗಾಯಗಳ ಜೊತೆ ಹೊರ ಮೈನರಗಳ ಅಂಗದ ಗಾಯಗಳಿಂದ ರೋಗದ ಚಿಹ್ನೆಗಳು ಕಾಣಬರುವುವು. ನರದುರಿತದಿಂದ ನರಗಳು ದಪ್ಪವಾಗುತ್ತವೆ. ಕೈಯಿಂದ ಮುಟ್ಟಲು ಸುಲಭವಾಗಿ ಸಿಕ್ಕುವ ಕತ್ತಿನ ಪಕ್ಕದ ಕಿವಿಯ ಹಿಂದಿನ ನರಗಳೂ ಮೊಣಕೈ ಹಿಂದಿನ ನರಗಳೂ ಮೊಣಕಾಲಿನ ಪಕ್ಕದಲ್ಲಿರುವ ನರಗಳೂ ದಪ್ಪವಾಗಿ ಮುಟ್ಟಿದರೆ ನೋಯುತ್ತವೆ. ನರಗಳ ಸುತ್ತಲಿರುವ ಶ್ವಾನ್‍ಜೀವಕಣಗಳಲ್ಲಿ ಕುಷ್ಠ ದಂಡಾಣುಗಳು ಯಥೇಚ್ಚವಾಗಿ ಬೆಳೆಯುತ್ತವೆ. ಹೊರ ಮೈನರಗಳನ್ನು ರೋಗಾಣುಗಳು ಆಕ್ರಮಿಸುವುದರಿಂದ ಕುಷ್ಠ ರೋಗದ ಅತ್ಯಂತ ಕ್ರೂರ ಲಕ್ಷಣಗಳು ಪ್ರಕಟವಾಗುತ್ತವೆ. ಇದರಿಂದ ಎರಡು ಕೆಡಕುಗಳಾಗಬಹುದು. ಚಾಲಕ ನರಗಳ ಅರನಾರಿಯಿಂದ ಚಾಲನ ಕ್ರಿಯೆ ಸ್ಥಗಿತಗೊಂಡು ರೋಗಿ ಬೀಳುಪಾದನಾಗಬಹುದು. ಕಣ್ಣು ರೆಪ್ಪೆ ಆಡಿಸದಂತೆ ಕೆಳಬೀಳಬಹುದು, ಅಥವಾ ಪಂಜಗೈ ಯಾಗಬಹುದು. ಅರಿವಳಿಕೆಯಿಂದ ಚರ್ಮ  ಮತ್ತು ಲೋಳೆಪೊರೆಗಳಿಗೆ ಪೆಟ್ಟುಗಳು ತಾಕಿ ದುಷ್ಪರಿಣಾಮಗಳಾಗುತ್ತವೆ. ಇವುಗಳಲ್ಲಿ ಸಹಿಸಲಾಗದ ಕಷ್ಟತರದ್ದು ಪುಷ್ಟಿಗೇಡಿನ ಪಾದದ ಹುಣ್ಣು. ಅರಿವಳಿದ ಕರಿಗುಡ್ಡೆಯ ಜೊತೆಗೆ ಬೀಳುರೆಪ್ಪೆಯ ಪರಿಣಾಮದಿಂದ ಕಣ್ಣು ಸದಾ ಅಪಾಯಗಳಿಗೆ ಈಡಾಗಿ ಗಾಯಗೊಂಡು, ಕೀವು ಸೇರಿ, ತೂತಾಗಿ ಕೊನೆಗೆ ಕಣ್ಣು ಹಿಂಗಿ ಕುರುಡುತನ 25% ರಷ್ಟು ರೋಗಿಗಳಿಗೆ ಸಂಭವಿಸಬಹುದು. ಇದನ್ನು ತಪ್ಪಿಸಬೇಕಾದರೆ ಎಲ್ಲ ಕುಷ್ಠ ರೋಗಿಗಳ ಕಣ್ಣುಗಳನ್ನು 6 ತಿಂಗಳಿಗೆ ಒಂದು ಸಲ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ಕೊಡಬೇಕು.

	ಕುಷ್ಠ ದಂಡಾಣು ಆವರಿಸುವ ದೇಹದ ಬೇರೆ ಭಾಗಗಳು ಮೂಳೆ ಮತ್ತು ತರಡು ಬೀಜಗಳು. ಮೂಗಿನ ಕಂಬಕುಸಿಯುವುದು, ಹಸ್ತದ ಮೂಳೆಗಳು ಟೊಳ್ಳಾಗುವುದು. ಇದಕ್ಕೆ ನಿದರ್ಶನ. ಮುಂದುವರಿದ ಕುಷ್ಠಗಂತಿ ತೆರನ ಕುಷ್ಠದಲ್ಲಿ ದೇಹಾದ್ಯಂತ ರೋಗ ಹರಡಿದ ಸೂಚನೆಗಳಿವೆ. ಆದರೆ ಈ ರೋಗದ ಇತರ ರೂಪಗಳಲ್ಲಿ ದೇಹದ ಕೆಲವೇ ಭಾಗಗಳಲ್ಲಿ ಚಿಹ್ನೆಗಳಿರುತ್ತವೆ. ಕುಷ್ಠ ದಂಡಾಣುಗಳು ದೇಹದ ತಂಪಾದ ಅಂಗಾಂಶಗಳನ್ನೇ ಆರಿಸಿಕೊಳ್ಳುವುವೆಂದು ಸೂಚನೆಗಳಿವೆ. ಚರ್ಮ, ತರಡು, ಕಣ್ಣಿನ ಮುಂದಿನ ಅರ್ಧಭಾಗ, ಹೊರ ಮೈ ನರಗಳು, ಶ್ವಾಸನಾಳದ ಲೋಳೆ  ಪೊರೆ - ಈ ಭಾಗಗಳಲ್ಲಿ ದೇಹದ ಉಷ್ಣತೆಯ ಮಟ್ಟ ತಗ್ಗಾಗಿರುತ್ತದೆ. ಚರ್ಮದಲ್ಲಿ ಕಡಿಮೆ ಉಷ್ಣತೆ ಇರುವ ಕಡೆ ನರಗಳು ಮೊದಲು ನಾಶವಾಗುವುದೆಂದು ತಿಳಿಯ ಬಂದಿದೆ.

	ರೋಗ ನಿದಾನ : ರೋಗ ತಗುಲಿದ ಮೇಲೆ ಚಿಹ್ನೆಗಳು ಕಾಣಿಸುವ ಮೊದಲು ಅಂದರೆ, ಕುಮಲುವ ಕಾಲದಲ್ಲಿ ರೋಗವನ್ನು  ಗುರುತಿಸಲಾಗುವುದಿಲ್ಲ. ಇದಕ್ಕೆ ಯಾವ ಸುಲಭ ಪ್ರಯೋಗ ಪರೀಕ್ಷೆಯೂ ಇಲ್ಲ. ಕುಷ್ಠ ರೋಗದ ಕಲೆಗಳು ಅನೇಕ ಚರ್ಮರೋಗಗಳನ್ನು ಹೋಲುತ್ತವೆ. ಸಂಶಯವಾದ ಕಲೆಗಳಿದ್ದರೆ ವೈದ್ಯರಿಂದ ಪರೀಕ್ಷೆ ಅಗತ್ಯ. ಚರ್ಮ ಮತ್ತು ಹೊರ ಮೈ ನರಗಳ ಪರೀಕ್ಷೆಗಳಿಂದ ವೈದ್ಯರು ರೋಗದ ಚಿಹ್ನೆಗಳನ್ನು ಗುರುತಿಸುತ್ತಾರೆ. ಚರ್ಮದ ಕಲೆಗಳಿಂದ ಊತಕದ ತಿರುಳನ್ನು ಚಾಕುವಿನಿಂದ ತೆಗೆದು ಸವರಿ ಬಣ್ಣ ಕೊಟ್ಟು ಪರೀಕ್ಷೆ ಮಾಡುವುದರಿಂದ ಸೂಕ್ಷ್ಮ ದರ್ಶಕದಲ್ಲಿ ಕುಷ್ಠ ದಂಡಾಣುಗಳನ್ನು ಕಂಡುಹಿಡಿಯಬಹುದು. ಕುಷ್ಠಗಂತಿ ತೆರನ ರೂಪದಲ್ಲಿ ದಂಡಾಣುಗಳು ಹೇರಳವಾಗಿ ಊತಕದ ಬಳಿತದಲ್ಲಿ ಕಂಡು ಬರುವುವು. ದ್ವಿರೂಪ ಕುಷ್ಠದಲ್ಲಿ ಇದನ್ನು ಒಮ್ಮೊಮ್ಮೆ ಕಾಣಬಹುದು. ಆದರೆ ಕ್ಷಯಗಂತಿಯಂಥ ರೂಪದಲ್ಲಿ ಪ್ರತಿಕ್ರಿಯೆ ಸಮಯಗಳಲ್ಲಲ್ಲದೆ ಬೇರೆ ಕಾಲದಲ್ಲಿ ಕಾಣವು.

	ರೋಗದ ವರ್ಗೀಕರಣಕ್ಕೆ ಮತ್ತು ರೋಗದ ಮುನ್ನರಿಕೆಗೆ ಕುಷ್ಠಾಣುಸಾರ ಸಹಾಯಕವಾಗಿದೆ. ರೋಗನಿದಾನಕ್ಕೆ ಉಪಯೋಗವಲ್ಲ. ಕುಷ್ಠಗಂತಿಗಳನ್ನು ರೋಗಿಗಳಿಂದ ತೆಗೆದು ಅದರಿಂದ ತಯಾರಿಸಿದ ರಸವನ್ನು ಚರ್ಮಕ್ಕೆ ಚುಚ್ಚಿ ಚರ್ಮದ ಪ್ರತಿಕ್ರಿಯೆಯನ್ನು ನೋಡುತ್ತಾರೆ. ನಿಗ್ರಹಣಶಕ್ತಿ ಹೆಚ್ಚಿರುವ ಕುಷ್ಠರೋಗದ ರೂಪಗಳಲ್ಲಿ ಇದೊಂದು ಶಿಷ್ಟ ಪರೀಕ್ಷೆ. ನಿಗ್ರಹಣ ಶಕ್ತಿ ಇಲ್ಲದ ಕುಷ್ಠಗಂತಿ ತೆರನ ರೂಪದಲ್ಲಿ ಈ ಪರೀಕ್ಷೆ ತರವಲ್ಲ.

	ಚಿಕಿತ್ಸೆ : ಕಳೆದ 25 ವರ್ಷಗಳಲ್ಲಿ ರೋಗದ ಚಿಕಿತ್ಸೆ ಮತ್ತು ಚಿಕಿತ್ಸೆಯ ಫಲಿತಾಂಶ ಬಹುಮಟ್ಟಿಗೆ ಉತ್ತಮಗೊಂಡಿವೆ. ಹಿಂದೆ ಚಾಲಮೂಗ್ರ ಮತ್ತು ಹಿಡಿನೋಕಾರ್ಪಸ್ ಎಣ್ಣೆಗಳಿಂದ ತಯಾರಾದ ಔಷಧಿಗಳನ್ನು ಬಿಟ್ಟರೆ ಬೇರೆ ಯಾವ ಔಷಧಿಗಳೂ ಇರಲ್ಲಿಲ್ಲ. ಇವೂ ಅಷ್ಟು ಪ್ರಯೋಜನಕಾರಿಗಳಾಗಿರಲಿಲ್ಲ. 25 ವರ್ಷಗಳಿಂದ ಬಳಿಕೆಯಲ್ಲಿರುವ ಡ್ಯಾಪ್‍ಸೋನ್ ಅತ್ಯುಪಯುಕ್ತವಾಗಿ ಕಂಡುಬಂದಿದೆ. ಈ ಸಣ್ಣ ಗುಳಿಗೆಗಳನ್ನು ನುಂಗಬಹುದು. ಬೆಲೆ ಸುಲಭ. ಕುಷ್ಠರೋಗದ ಔಷಧಿಗಳಿಗೆ ಇವೆರಡೂ ಮುಖ್ಯ ಗುಣಗಳು. ಡ್ಯಾಪ್‍ಸೋನನ್ನು ಪ್ರಾರಂಭಾವಸ್ಥೆಯಲ್ಲಿ  ಸೇವಿಸಿದರೆ ಆ ರೋಗಿ ತನ್ನ ಅಂಗವಿಕಾರವಾಗುವ ಮೊದಲೇ ಪೂರ್ಣವಾಗಿ ಗುಣ ಹೊಂದುವನು. ಸುಮಾರು 6 ರಿಂದ 12 ತಿಂಗಳ ಸೇವನೆಯಿಂದ ಅಂಟುರೋಗಿಗಳು ಅಂಟಿಲ್ಲದಂತೆ ಆಗುತ್ತಾರೆ. ರೋಗಮುಂದುವರಿದ ಮೇಲೆ ಚಿಕಿತ್ಸೆಯನ್ನು ಪ್ರಾರಂಭಿಸಿದರೆ ಅಂಗವಿಕಾರಗಳನ್ನು ಗುಣಪಡಿಸಲಾಗದು, ರೋಗ ಮಾತ್ರ ವಾಸಿಯಾಗಬಹುದು. ಈ ಔಷಧಿಯ ಉಪಯೋಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ. ದಿನವಹಿ ಸೇವಿಸಬೇಕಾದ ಪರಿಮಾಣ ಎಷ್ಟು ಮತ್ತು ಸೇವನೆಯ ಕಾಲಾವಧಿ ಎಷ್ಟು ಎಂಬ ವಿಚಾರದಲ್ಲಿ ಒಮ್ಮತವಿಲ್ಲ. 20 ವರ್ಷಗಳ ಹಿಂದೆ ಕೊಡುತ್ತಿದ್ದ ಪರಿಮಾಣಕ್ಕಿಂತ ಬಹು ಕಡಿಮೆ ಸಾಕು ಎನ್ನುವುದು ಈಚಿನ ಮತ. ಈ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸಬೇಕು. ಡ್ಯಾಪ್‍ಸೋನ್ ಚಿಕಿತ್ಸೆಯಲ್ಲಿ ಎರಡು ಮುಖ್ಯ ತೊಡಕುಗಳಿವೆ. ಕೆಲವುವೇಳೆ ದಂಡಾಣುಗಳು ಈ ಔಷಧಿಗೆ ಪ್ರತಿರೋಧ (ರೆಸಿಸ್ಟೆನ್ಸ್) ಪಡೆಯಬಹುದು. ಅಂಥ ರೋಗಿಗಳಲ್ಲಿ ಬೇರೆ ಔಷಧಿ ಪ್ರಯೋಗ ಮಾಡಬೇಕಾಗಬಹುದು. ಮತ್ತೆ ಕೆಲವು ವೇಳೆ ಅದರಲ್ಲೂ ಕುಷ್ಠಗಂತಿ ತೆರನ ರೂಪದಲ್ಲಿ ಆಗುವ ಕೆಂಪು ಗಂತಿ ಕುಷ್ಠಾಂದ ಪ್ರತಿಕ್ರಿಯೆಯನ್ನು ಹತೋಟಿಗೆ ತರುವುದು ಕಷ್ಟಸಾಧ್ಯ. ಡ್ಯಾಪೊಸೋಸ್ ಪ್ರತಿರೋಧವಿರುವ ರೋಗಿಗಳಲ್ಲಿ ಉಪಯೋಗಿಸಬಹುದಾದ ತಯಾಂಬೂಟೋಸೋನ್, ತಯಾಸಿಟಾಮೈಡ್, ಇಟಿಸಲ್ ಮತ್ತು ಲ್ಯಾಮಾಪ್ರೀನ್ ಎಂಬ ಹೊಸ ಔಷಧಗಳಿವೆ. ಇವನ್ನೆಲ್ಲಾ ಡ್ಯಾಪ್‍ಸೋನ್ ಪ್ರತಿರೋಧದಲ್ಲಿ ಬದಲಿ ಔಷಧಿಗಳಾಗಿ ಉಪಯೋಗ ಮಾಡಬಹುದು. ಲ್ಯಾಮಪ್ರೀನ್ ಕೆಂಪುಗಂತಿ ಕುಷ್ಠಾಂದ ಪ್ರತಿಕ್ರಿಯೆ ಶಮನಕ್ಕೂ ಸಹಾಯಕ. ರೋಗದ ಪ್ರಾರಂಭದಲ್ಲಿ ಚಿಕಿತ್ಸೆ ಪಡೆಯುವವರಿಗೆ ಕಾಲು ಕೈ ಮತ್ತು ಮುಖದಲ್ಲಿ ಅಂಗವಿಕಾರಗಳಾಗುತ್ತವೆ. ಇಂಥ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯಿಂದ ಕೈ ಕಾಲುಗಳ ಬಳಕೆಯನ್ನು ತಕ್ಕಮಟ್ಟಿಗೆ ಮೊದಲ ಸ್ಥಿತಿಗೆ ತರಬಹುದು. ಮುಖದ ವಿಕಾರಗಳನ್ನು ಸರಿಪಡಿಸಬಹುದು. ಭೌತರೋಗ ಚಿಕಿತ್ಸೆಯಿಂದ ನಾಶವಾದ ನರಗಳಿಂದಾಗುವ ಪರಿಣಾಮಗಳನ್ನು ಸರಿಪಡಿಸಬಹುದು. 
ಕುಷ್ಠರೋಗ ನಿವಾರಣೆ ಮತ್ತು ಹತೋಟಿ: ರೋಗ ಹರಡುವ ಮಾರ್ಗ ತಿಳಿಯದಾಗ ಅದರ ನಿವಾರಣೆ ಕಷ್ಟ. ಕುಷ್ಠರೋಗ ಹರಡುವ ಮಾರ್ಗ ನಿರ್ದಿಷ್ಟವಾಗಿ ಗೊತ್ತಿಲ್ಲ. ಆದರೂ ಬೇರೆ ದಂಡಾಣುಜೀವಿಗಳಿಂದ ಮನುಷ್ಯರಲ್ಲಿ ಹರಡುವ ಕ್ಷಯರೋದ ನಿವಾರಣೆಯಲ್ಲಿ ಉಪಯುಕ್ತವಾದ ಮೂರು ಮಾರ್ಗಗಳನ್ನು ಇಲ್ಲಿಯೂ ಅನುಸರಿಸಬಹುದು. 1 ಅಂಟುರೋಗಿಯನ್ನು ಬೇರೆಯಾಗಿಡುವುದು ಮತ್ತು ಚಿಕಿತ್ಸೆ : 2 ಲಸಿಕೆ ಹಾಕುವುದರಿಂದ ರೋಗ ನಿಗ್ರಹಣ ಶಕ್ತಿಯನ್ನು ಹೆಚ್ಚಿಸುವುದು : 3 ಔಷಧಿಗಳನ್ನು ಜನಸಾಮಾನ್ಯರಿಗೆ ಕೊಟ್ಟು ರೋಗವನ್ನು ಹತೋಟಿಗೆ ತರುವುದು.

	ಇತರ ಸಾಂಕ್ರಾಂಮಿಕ ರೋಗಗಳೊಡನೆ ಹೋಲಿಸುವಾಗ ಕುಷ್ಠರೋಗಕ್ಕೆ ಅತಿ ಲಘುವಾದ ಅಂಟುತನವಿರುವುದರಿಂದ ಈ ರೋಗಿಗಳನ್ನು ಬೇರೆ ಆಸ್ಪತ್ರೆಗಳಲ್ಲಿಡ ಬೇಕಿಲ್ಲ. ಹೊರ ರೋಗಿಗಳಾಗಿ ಚಿಕಿತ್ಸೆ ಮಾಡಬಹುದು. ತೀವ್ರ ಪ್ರತಿಕ್ರಿಯೆ, ಶಸ್ತ್ರ ಚಿಕಿತ್ಸೆ, ಉಲ್ಬಣಾವಸ್ಥೆಗಳಲ್ಲಿ ಮಾತ್ರ ಆಸ್ಪತ್ರೆಗಳೆಗೆ ಸೇರಿಸಬೇಕು. ಬಾಕಿಯಂತೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯಬಹುದು. ಕ್ಷಯರೋಗ ನಿವಾರಣೆಗೆ ಉಪಯೋಗಮಾಡುವ ಬಿ.ಸಿ.ಜಿ. ಲಸಿಕೆಯನ್ನು ಕುಷ್ಠರೋಗ ತಡೆಗಟ್ಟಲು ಉಪಯೋಗಿಸಲಾಗಿದೆ. ಇದರ ಉಪಯುಕ್ತತೆ ಸಂಪೂರ್ಣವಾಗಿ ತಿಳಿದಿಲ್ಲ. ಆದರೂ ಆಶಾದಾಯಕವಾಗಿದೆ. ಅಂಟಾದ ಕುಷ್ಠರೋಗಿಯ ಮನೆಯಲ್ಲಿ ವಾಸಮಾಡುವವರಿಗೆ ಡ್ಯಾಪ್‍ಸೋನ್ ಗುಳಿಗೆಗಳನ್ನು ಕೊಡುವುದರಿಂದ ಅವರಿಗೆ ರೋಗ ತಗಲದಂತೆ ಮಾಡಬಹುದು. ಪ್ರಾದೇಶಿಕ ವ್ಯಾಪ್ತಿಯಿರುವ ಕುಷ್ಠರೋಗ ಕೆಲವು ಹಳ್ಳಿಗಳಲ್ಲಿ ಹೆಚ್ಚಾಗಿರುತ್ತದೆ. ಅಂಥ ಹಳ್ಳಿ ಕೇರಿಗಳಲ್ಲಿರುವ ಎಲ್ಲರಿಗೂ ಮುನ್ನೆಚ್ಚರಿಕೆಯಾಗಿ ಒಂದೆರಡು ವರ್ಷಕಾಲ ಡ್ಯಾಪ್‍ಸೋನ್ ಕೊಡುವುದರಿಂದ ರೋಗಿಗಳಿಗೆ ಗುಣವಾಗುವುದಲ್ಲದೇ ಬೇರೆಯವರಿಗೆ ರೋಗ ಹರಡುವುದೂ ತಡೆದಂತಾಗುವುದು. ಈ ಪ್ರಯೋಗವನ್ನು ಕೆಲವು ದೇಶಗಳಲ್ಲಿ ಪ್ರಪಂಚದ ಆರೋಗ್ಯ ಸಂಸ್ಥೆ ನಡೆಸಿದೆ. ಭಾರತದಲ್ಲಿಯೂ ನಡೆಸಿದ ಪ್ರಯೋಗದಿಂದ ಇದು ರೋಗನಿವಾರಣೆಗೆ ಪರಿಣಾಮಕಾರಿ ಎಂದು ತಿಳಿದುಬಂದಿದೆ.

(ಡಿ.ಪಿ.ಜೆ.; ಬಿ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ